ರಜಪೂತರು - ಮಧ್ಯಕಾಲೀನ ಪಶ್ಚಿಮ ಭಾರತದ ಒಂದು ಪ್ರಸಿದ್ಧ ವಂಶ. ಹರ್ಷವರ್ಧನ ಮರಣದ ಬಳಿಕ 7 ನೆಯ ಶತಮಾನದ ಮಧ್ಯ ಭಾಗದಿಂದ 12 ನೆಯ ಶತಮಾನದ ಕೊನೆಯಲ್ಲಿ ಮಹಮ್ಮದೀಯರ ಹಿಂದೂಸ್ಥಾನವನ್ನು ಗೆಲ್ಲುವವರೆಗೂ ಇವರು ಬಹುಮಖ್ಯ ಪಾತ್ರ ವಹಿಸಿದ್ದರು.  ರಜಪೂತ ಮನೆತನಗಳ ಮೂಲದ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಸಮಕಾಲೀನ ಗ್ರಂಥಗಳು ಇವರ ಪೂರ್ವಜರು ಸೂರ್ಯ, ಚಂದ್ರ ಅಥವಾ ಪುರುವಂಶಸ್ಥರೆಂದು ವಿವರಿಸಿದೆ. ಚಾಂದ್ ಬರ್ದೋಯಿ ರಚಿಸಿದ ಪೃಥ್ವೀರಾಜ್‍ರಾಶೋ ಗ್ರಂಥದಲ್ಲಿ ಇವರನ್ನು ಅಗ್ನಿಕುಲದವರೆಂದು ಬಣ್ಣಿಸಲಾಗಿದೆ. ರಜಪೂತ ಎಂಬುದು ರಾಜಪುತ್ರ ಎಂಬ ಸಂಸ್ಕøತ ಪದದಿಂದ ನಿಷ್ಪನ್ನವಾಗಿದೆ. ರಜಪೂತರು ಶೂರರು, ಧೈರ್ಯಶಾಲಿಗಳು, ಸ್ವಾತಂತ್ರ್ಯ ಮತ್ತು ರಾಷ್ಟ್ರಪ್ರೇಮಿಗಳು, ಅದರ ಇವರು ಬಹುಕಾಲ ಒಗ್ಗಟ್ಟಿನಿಂದಿರುತ್ತಿರಲಿಲ್ಲ. ಗೂರ್ಜರರು, ಗಾಹದ್ವಾಲ ಮನೆತನ, ಮಾಳವದ ಪರಮಾರರು - ಇವು ರಜಪೂತರ ಪ್ರಸಿದ್ಧ ರಾಜಮನೆತನಗಳು.

ಗೂರ್ಜರರು: ಗುಪ್ತ ಸಾಮ್ರಾಜ್ಯದ ಅವನತಿಯ ಅನಂತರ ಜೋಧಪುರದ ಸುತ್ತಲಿನ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ವಂಶ. ಈಗಿನ ರಾಜಸ್ತಾನದ ಬಹುಭಾಗವನ್ನು ಹಿಂದೆ ಗೂರ್ಜರಾತ್ರ ಅಥವಾ ಗುಜರಾತವೆಂದೇ ಕರೆಯಲಾಗುತ್ತಿತ್ತು. ಈ ವಂಶದ ಮೂಲಪುರುಷ ಹರಿಚಂದ್ರ. ಈತ ಮಾಳವದ ಯಶೋವರ್ಮನ ರಾಜ್ಯ ಅವನತಿ ಹೊಂದಿದ ಮೇಲೆ ರಾಜ್ಯವೊಂದನ್ನು ಕಟ್ಟಿದ. ಇವನ ಮಕ್ಕಳಾದ ಭೂಗಭಟ, ಕಕ್ಕುಲ, ರಜ್ಜಿಲ ಮತ್ತು ದದ್ದ ಇವರು ಮಾಂಡವ್ಯಪುರವನ್ನು ಗೆದ್ದು ಅಲ್ಲಿ ಪ್ರಬಲವಾದ ಕೋಟೆಯನ್ನು ಕಟ್ಟಿ ತಮ್ಮ ರಾಜ್ಯವನ್ನು ವಿಸ್ತರಿಸಿದರು. ಈ ವಂಶಕ್ಕೆ ಸೇರಿದ ಅನೇಕ ಶಾಖೆಗಳು ಆರು ಮತ್ತು ಏಳನೆಯ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದುವು. ಬಾಣದ ಹರ್ಷಚರಿತೆಯಲ್ಲಿ ಇವರನ್ನು ಉಲ್ಲೇಖಿಸಲಾಗಿದೆ. ಯುವಾನ್ ಚಾಂಗ್‍ನ ಬರವಣಿಗೆಗಳಲ್ಲಿ ಹಾಗೂ ಪುಲಕೇಶಿಯ ಐಹೊಳೆ ಶಾಸನದಲ್ಲೂ ಇವರನ್ನು ಉಲ್ಲೇಖಿಸಲಾಗಿದೆ. ಭರಕುಚ್ಚದ ಗೂರ್ಜರರು, ಮೇವಾರದ ಗುಹಿಲ ಪುತ್ರರು, ಅನಿಲವಾಡ ಮತ್ತು ಅವಂತಿಯ ಗೂರ್ಜರ ಪ್ರತೀಹಾರರು ಗೂರ್ಜರ ವಂಶಕ್ಕೆ ಸೇರಿದವರು. ಇವರಲ್ಲಿ ಅತ್ಯಂತ ಪ್ರಮುಖರಾದವರು ಅವಂತಿಯ ಗೂರ್ಜರ ಪ್ರತೀಹಾರರು.								(ನೋಡಿ- ಗೂರ್ಜರ-ವಂಶ)

ಚೌಹಾಣರು: ಚಾಹಮಾನರು ಎಂದೂ ಇವರನ್ನು ಕರೆಯಲಾಗಿದೆ. ಈ ಮನೆತನದ ರಾಜರು ಶಾಕಂಬರಿ, ರಣತಂಬೂರ್, ನಿಂಡಲ್ ಮತ್ತು ಚಾಲೋರ್‍ಗಳಲ್ಲಿ ಆಳಿದರು. ಇವುಗಳಲ್ಲಿ ಪ್ರಮುಖವಾದದ್ದು ಶಾಕಂಬರಿಯ ಚೌಹಾಮಾನ ಮನೆತನ. ಈ ಮನೆತನವನ್ನು ಸಾಂಬಾರ ಚಾಹನಾನ ಮನೆತನವೆಂದೂ ಕರೆಯಲಾಗುತ್ತಿತ್ತು. 10 ನೆಯ ಶತಮಾನದ ಪ್ರಾರಂಭದಲ್ಲಿ ಸ್ಥಾಪಿತವಾದ ಈ ಮನೆತನದ ಪ್ರಾರಂಭಿಕ ಅರಸರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಮೂರನೆಯ ವಿಗ್ರಹರಾಜನ ಕಾಲದಿಂದ ನಿಖರವಾದ ಮಾಹಿತಿ ದೊರಕುತ್ತದೆ. ವಿಗ್ರಹರಾಜನ ಉತ್ತರಾಧಿಕಾರಿಯಾದ ಒಂದನೆಯ ಪೃಥ್ವೀರಾಜ 1105 ರಲ್ಲಿ ಆಳುತ್ತಿದ್ದ. ಇವನ ಮಗ ಅಜೇಯರಾಜ ಚಾಹಮಾನರ ರಾಜ್ಯವನ್ನು ವಿಸ್ತರಿಸಿದ. ಅಜೇಯರಾಜನ ಅಜಮೇರು ಅಥವಾ ಅಜ್ಮೀರ್ ನಗರವನ್ನು ಸ್ಥಾಪಿಸಿ ಅಲ್ಲಿ ಸುಂದರ ಅರಮನೆಗಳನ್ನು ದೇವಾಲಯಗಳನ್ನು ಕಟ್ಟಿಸಿದ. ಅನಂತರ ಬಂದ ಅರ್ಣೋರಾಜನ ವಿಷಯವಾಗಿ ಏನೂ ತಿಳಿದುಬರುವುದಿಲ್ಲ. ಅರ್ಣೋರಾಜನ ಅನಂತರ ನಾಲ್ಕನೆಯ ವಿಗ್ರಹರಾಜ ಸಿಂಹಾಸನಕ್ಕೆ ಬಂದ (1153). ಈತ ತೋಮಾರರನ್ನು ಸೋಲಿಸಿ ದೆಹಲಿಯನ್ನು ವಶಪಡಿಸಿಕೊಂಡ; ಪಂಜಾಬಿನ ಮೇಲೆ ಧಾಳಿಮಾಡಿ ಮಹಮ್ಮದೀಯ ಸೈನ್ಯಗಳನ್ನು ಹಿಮ್ಮೆಟ್ಟಿಸಿದ. ಜೋಧಪುರ ಮತ್ತು ಜಾಲೋರ್ ಪ್ರದೇಶಗಳನ್ನೂ ಆಕ್ರಮಿಸಿದ. ಈತ ಸ್ವತಃ ಕವಿಯಾಗಿದ್ದು ಹರಕೇಲಿ ನಾಟಕದ ಕರ್ತೃ ಎಂದು ಹೇಳಲಾಗಿದೆ. ವಿಗ್ರಹರಾಜನ ಮರಣಾನಂತರ ಆಳಿದವರಲ್ಲಿ ಇಮ್ಮಡಿ ಪೃಥ್ವೀರಾಜ ಮತ್ತು ಸೋಮೇಶ್ವರ ಉಲ್ಲೇಖನೀಯ. ಸೋಮೇಶ್ವರನ ಮಗ ಮೂರನೆಯ ಪೃಥ್ವೀರಾಜ 1177 ರಲ್ಲಿ ಪಟ್ಟಕ್ಕೆ ಬಂದ.

ಮುಮ್ಮಡಿ ಪೃಥ್ವೀರಾಜ ಚಾಹಮಾನ ಅಥವಾ ಚೌಹಾಣ ಸಂತತಿಯ ಅರಸರಲ್ಲಿ ಅತ್ಯಂತ ಪ್ರಖ್ಯಾತ, ಪೃಥ್ವೀರಾಜನ ಜೀವನಚರಿತ್ರೆಗೆ ಸಂಬಂಧಿಸಿದಂತೆ ಜಯಚಂದ್ರನ ಮಗಳು ಸಂಯುಕ್ತೆಯನ್ನು ವರಿಸಿದುದು ಸ್ವಾರಸ್ಯಕರವಾಗಿ ಅನೇಕ ಗ್ರಂಥಗಳಲ್ಲಿ ವಿವರಿಸಲ್ಪಟ್ಟಿದೆ.  ಇದು ಇಂದಿಗೂ ಹೆಚ್ಚು ಪ್ರಚಲಿತವಾಗಿರುವ ಕಥೆ.  ಪೃಥ್ವೀರಾಜ ಒಬ್ಬ ದಂಡನಾಯಕ ಮತ್ತು ಅಸಮಾನ ಶೂರ. ಈತ ಅನೇಕ ರಾಜರನ್ನು ಸೋಲಿಸಿದ ಅಪ್ರತಿಮ ವೀರ. ತನ್ನ ರಾಜ್ಯದ ಅಕ್ಕಪಕ್ಕದಲ್ಲಿದ್ದ ರಾಜರನ್ನು ಸೋಲಿಸಿ ಒಂದು ವಿಸ್ತಾರವಾದ ರಾಜ್ಯವನ್ನು ಕಟ್ಟಿದ. ಅದರ ಪೃಥ್ವೀರಾಜ ತನ್ನ ಕೊನೆಯ ವರ್ಷಗಳಲ್ಲಿ ಮಹಮ್ಮದೀಯರ ಧಾಳಿಗಳಲ್ಲಿ ಎದುರಿಸಬೇಕಾಯಿತು. ಘೋರಿ ಮಹಮ್ಮದ್ ಭಾರತದ ಮೇಲೆ ಧಾಳಿ ಮಾಡಿ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡ. 1182 ರಲ್ಲಿ ಸಿಂಧ್ ಪ್ರಾಂತ್ಯ 1184 ರಲ್ಲಿ ಲಾಹೋರ್ ಮತ್ತು ಪಂಜಾವಿನ ಅನೇಕ ಪ್ರದೇಶಗಳು ಅವನ ವಶವಾದವು. ಪಂಜಾಬಿನ ಆಕ್ರಮಣ ರಜಪೂತರನ್ನು ಎಚ್ಚರಿಸಿತು. ಮಹಮ್ಮದೀಯರ ಈ ಧಾಳಿಯನ್ನು ತಡೆಯುವ ಸಲುವಾಗಿ ಪೃಥ್ವೀರಾಜನನ್ನು ಸೆರೆಹಿಡಿದು ಕೊಂದ. ಪೃಥ್ಯೀರಾಜನ ಮಗ ಪಟ್ಟಕ್ಕೆ ಬಂದರೂ ಸ್ವಲ್ಪ ಕಾಲದಲ್ಲಿ ಚಾಹಮಾನ ವಂಶ ಕೊನೆಗೊಂಡಿತು. ಇವನ ವಂಶಸ್ಥರು ರಣತಂಬೂರಿನಲ್ಲಿ ಮತ್ತೊಂದು ಶತಮಾನ ಕಾಲ ಉಳಿದು ಬಂದರು.   (ನೋಡಿ- ಚೌಹಾಣರು)

ಗಾಹದ್ವಾಲ ಮನೆತನ: 11 ನೆಯ ಶತಮಾನದ ಉತ್ತರಾರ್ಧದಲ್ಲಿ ಕನೌಜಿನಲ್ಲಿ ಅಧಿಕಾರಕ್ಕೆ ಬಂದ ರಾಜಮನೆತನ. ಈ ಮನೆತನದ ಪ್ರಥಮ ದೊರೆ ಯಶೋವಿಗ್ರಹ. ಅನಂತರ ಮಹೀಚಂದ್ರ ಪಟ್ಟಕ್ಕೆ ಬಂದ. ಇವನು ಉತ್ತರ ಪ್ರದೇಶದ ಕೆಲವು ಭಾಗಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಿದ.  ಇವನ ಮಗ ಚಂದ್ರದೇವ ರಾಜನಾದ ಮೇಲೆ ಪಾಂಚಾಲದ ರಾಷ್ಟ್ರಕೂಟ ದೊರೆ ಗೋಪಾಲನನ್ನು ಸೊಲಿಸಿ ಕನೌಜನ್ನು ಗೆದ್ದುಕೊಂಡ. ಅಲಹಾಬಾದಿನಿಂದ ವಾರಣಾಸಿ ಅಯೋಧ್ಯಗಳವರೆಗಿನ ಪ್ರದೇಶಗಳೆಲ್ಲ ಚಂದ್ರದೇವನ ವಶವಾಗಿದ್ದುವು. ವಾರಾಣಸಿ ಗಾಹದ್ವಾಲ ರಾಜರ ಎರಡನೆಯ ರಾಜಧಾನಿಯಾಯಿತು. ಆದರೆ ಚಂದ್ರದೇವನ ಮಗ ಮದನಚಂದ್ರನ ಕಾಲದಲ್ಲಿ ಗಾಹದ್ವಾಲ ರಾಜ್ಯ ಮಹಮ್ಮದೀಯರ ಧಾಳಿಗೆ ತುತ್ತಾಗಿ ಅಪಾರ ನಷ್ಟವನ್ನು ಅನುಭವಿಸಿತು. ಅನಂತರ ಅಧಿಕಾರಕ್ಕೆ ಬಂದವನು ಇವನ ಮಗ ಗೋವಿಂದಚಂದ್ರ (1114 - 54). ಈತ ಗಾಹದ್ವಾಲ ವಂಶದ ಸಮರ್ಥ ದೊರೆಗಳಲ್ಲಿ ಒಬ್ಬ. ಈತ ಮಹಮ್ಮದೀಯರಮೇಲೂ ತ್ರಿಪುರಿಯ ಕಳಚೂರಿಗಳ ಮೇಲೂ ಬಂಗಾಲದ ಮದನಪಾಲನ ಮೇಲೂ ಜಯಗಳಿಸಿ ರಾಜ್ಯ ವಿಸ್ತರಿಸಿದನೆಂದು ಹೇಳಲಾಗಿದೆ. ಪೂರ್ವದಲ್ಲಿ ಮಾಳವ ವಶಪಡಿಸಿಕೊಂಡ; ಚೋಳರೊಡನೆ ವಿವಾಹಸಂಬಂಧ ಬೆಳೆಸಿದ. ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಟಂಕಿಸಿದ. ಇವನಿಗೆ ಸಾಹಿತ್ಯದಲ್ಲಿ ಅಪಾರ ಅಭಿರುಚಿಯಿತ್ತು. ಇವನ ಮಂತ್ರಿ ಪಕ್ಷ್ಮೀಧರನು `ಕೃತ್ಯಲ್ಪತರು` ಗ್ರಂಥ ರಚಿಸಿದ್ದ. ಗೋವಿಂದಚಂದ್ರನ ಮೂವರು ಮಕ್ಕಳಲ್ಲಿ ಮಧ್ಯದವನಾದ ವಿಜಯಚಂದ್ರ ಇವನ ಅನಂತರ ಪಟ್ಟಕ್ಕೆ ಬಂದ.

ವಿಜಯ ಚಂದ್ರನ ಅನಂತರ ಅಧಿಕಾರಕ್ಕೆ ಬಂದ ಜಯಚಂದ್ರ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಜಯಚಂದ್ರನ ಮಗಳಾದ ಸಂಯುಕ್ತೆಯನ್ನು ಅವಳ ಇಷ್ಟದಂತೆ ಚೌಹಾಣ ದೊರೆ ಪೃಥ್ವೀರಾಜ ಅಪಹರಿಸಿ ವರಿಸಿದ ಸಂಗತಿ ಪ್ರಸಿದ್ಧವಾಗಿದೆ.  ಇದರಿಂದ ಕುಪಿತನಾದ ಜಯಚಂದ್ರ ಪೃಥ್ವೀರಾಜನನ್ನು ಸೋಲಿಸಲು ಮಹಮ್ಮದ್ ಘೋರಿಗೆ ಜಯಚಂದ್ರನನ್ನು ಸೋಲಿಸಿದ.  ಜಯಚಂದ್ರನ ಮಗ ಹರಿಚಂದ್ರ ಪಟ್ಟಕ್ಕೆ ಬಂದರೂ ಕೆಲವೇ ಕಾಲದಲ್ಲಿ ಗಾಹದ್ವಾಲ ವಂಶ ಕೊನೆಗೊಂಡಿತು. 

(ನೋಡಿ- ಗಾಹದ್ವಾಲ-ಮನೆತನ)

ಗುಜರಾತಿನ ಚಾಳುಕ್ಯರು : ಗುಜರಾತ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 9 ರಿಂದ 12 ನೆಯ ಶತಮಾನಗಳಲ್ಲಿ ಆಳಿದ ಒಂದು ರಾಜಮನೆತನ. ಇವರು ಇತಿಹಾಸದಲ್ಲಿ ಗೂರ್ಜರರೆಂದೂ ಶೋಲಂಕಿಗಳೆಂದೂ ಪ್ರಸಿದ್ಧರಾಗಿದ್ದಾರೆ.  ಇವರು ಅಗ್ನಿಕುಲಕ್ಕೆ ಸೇರಿದವರೆಂದು ಕಥೆಯೊಂದು ಹೇಳುತ್ತದೆ. ಚಾಳುಕ್ಯರ ವಂಶದ ಸ್ಥಾಪಕ ಮೂಲರಾಜ (961-66). ತನ್ನ ರಾಜಧಾನಿ ಅನಹಿಲ್ ತಾತಿಕದಿಂದ ಹೊರಟು ಕಚ್ಚದೇಶದ ಲಾಬಾನನ್ನು. ಲಾಟ ದೇಶದ ಚಾರಪನನ್ನು ಪರಮಾರ ಮೂಲನನ್ನು ಸೋಲಿಸಿ ರಾಜ್ಯ ವಿಸ್ತರಿಸಿದ. ಅನಂತರ ಇವನ ಮಗ ಚಾಮುಂಡರಾಜ (930 - 1010) ಅಧಿಕಾರಕ್ಕೆ ಬಂದ. ಈತನೂ ಪರಮಾರ ಮತ್ತು ಕಳಚೂರಿಗಳ ಮೇಲೆ ಅನೇಕ ಯುದ್ಧಗಳನ್ನು ಕೈಗೊಂಡ. ಅನಂತರ ವಲ್ಲಭ, ದುರ್ಲಭ ಮತ್ತು ಒಂದನೆಯ ಭೀಮದೇವ ಆಳಿದರು. ಒಂದನೆಯ ಭೀಮದೇವನ ಆಳ್ವಿಕೆಯ ಕಾಲದಲ್ಲಿ ಘಜ್ನಿ ಮಹಮದ್ ಸೋಮನಾಥ ದೇವಾಲಯವನ್ನು ಕೊಳ್ಳೆಹೊಡೆದ. ಘಜ್ನಿ ಮಹಮದ್ ಹಿಂದಿರುಗಿದ ಮೇಲೆ ಅವನ ಮಗ ಕಣ್ಣ. ಅನಂತರ ಜಯಸಿಂಹ (1094 - 1144) ಅಧಿಕಾರಕ್ಕೆ ಬಂದರು. ಜಯಸಿಂಹ ಈ ರಾಜಸಂತತಿಯ ಅತ್ಯಂತ ಪ್ರಖ್ಯಾತ ರಾಜ. ಇವನ ಕಾಲದಲ್ಲಿ ಚಾಳುಕ್ಯ ರಾಜ್ಯ ಉತ್ತುಂಗ ಶಿಖರವನ್ನು ಮುಟ್ಟಿತು. ಇವನು ಸುಮಾರು ಹನ್ನೆರಡು ವರ್ಷಗಳ ಕಾಲ ಪರಮಾರರ ವಿರುದ್ಧ ಹೋರಾಡಿ ಅವರನ್ನು ಸೋಲಿಸಿದ. ಚಾಹಮಾನ ಅಣೋರಾಜನನ್ನು ಸೋಲಿಸಿ ಅವನನ್ನು ತನ್ನ ಸಾಮಂತನನ್ನಾಗಿ ಮಾಡಿಕೊಂಡ. ಕಲ್ಯಾಣ ಚಾಳುಕ್ಯರ ಪ್ರಸಿದ್ಧ ರಾಜ 6 ನೆಯ ವಿದ್ರಮಾದಿತ್ಯನ ಮೇಲೂ ಜಯಗಳಿಸಿದ. ಇವನು ಅರಬರ ಆಕ್ರಮಣವನ್ನು ಹಿಮ್ಮೆಟ್ಟಿಸಿದುದಾಗಿ ನಂಬಲಾಗಿದೆ. ಇವನ ರಾಜ್ಯ ಗುಜರಾತ್, ಕಾಠೇವಾಡ, ಕಛ್,ಮಾಳವ, ದಕ್ಷಿಣ ರಾಜಪುತಾನ ಮೊದಲಾದ ಪ್ರದೇಶಗಳನ್ನೊಳಗೊಂಡಿತ್ತು. ಜಯಸಿಂಹನಿಗೆ ಗಂಡು ಮಕ್ಕಳಿಲ್ಲವಾದುದರಿಂದ ಅವನ ಅನಂತರ ಅವನ ಸಂಬಂಧಿಕ ಕುಮಾರಪಾಲ (1144 - 73) ಪಟ್ಟಕ್ಕೆ ಬಂದ. ಈತ ಜೈನಮುನಿ ಹೇಮಚಂದ್ರನ ಪ್ರಭಾವಕ್ಕೊಳಗಾಗಿ ಜೈನ ಅಂರ್ತಯುದ್ಧಗಳಿಂದಾಗಿ ಚೌಳುಕ್ಯರಾಜ್ಯ ಅವನತಿಯನ್ನು ಹೊಂದಿತು.  ಅಲ್ಲಾವುದ್ದೀನ್ ಖಿಲ್ಜಿ ಈ ವಂಶದ ಕಡೆಯ ರಾಜನಾದ ಕರ್ಣನಿಂದ ಚೌಳುಕ್ಯ ರಾಜ್ಯವನ್ನು ವಶಪಡಿಸಿಕೊಂಡ (1299).		 (ನೋಡಿ- ಚೌಳುಕ್ಯ)

ಚಂದೇಲರು : 9 ನೆಯ ಶತಮಾನದಲ್ಲಿ ಪ್ರತೀಹಾರರ ಪತನದ ಅನಂತರ ಪ್ರಸಿದ್ಧಿಗೆ ಬಂದ ಮನೆತನ ಸ್ಥಾಪಿಸಿದ. ನನ್ನುಕ ಚಂದೇಲ ಖುಜರಾಹೋ ಎಂಬಲ್ಲಿ ಚಂದೇಲ ರಾಜ್ಯವನ್ನು ಸ್ಥಾಪಿಸಿದ. ಈತ ಚಂದ್ರವರ್ಮನೆಂಬ ಬಿರುದು ಹೊಂದಿದ್ದ.  ಈತನ ಅನಂತರ ಅಧಿಕಾರಕ್ಕೆ ಬಂದ ವಾಕ್ಪತಿ, ಜಯಶಕ್ತಿ, ವಿಜಯಶಕ್ತಿ, ಮತ್ತು ರಾಹಿಲ ಇವರು ಪ್ರತೀಹಾರರ ಸಾಮಂತರಾಗಿದ್ದರು. ರಾಹಿಲನ ಮಗ ಹರ್ಷ ಹಲವು ಪ್ರದೇಶಗಳನ್ನು ಗೆದ್ದು ಚಂದೇಲ ರಾಜ್ಯವನ್ನು ಬಲಪಡಿಸಿದ. ಹರ್ಷನ ಅನಂತರ ಕಳೆದುಕೊಂಡು ಹೆಸರಿಗೆ ಮಾತ್ರ ಅರಸರಾಗಿದ್ದರು. ಈತ ಪರಮಾರ ಸೀಯಕನನ್ನು ಬಂಗಾಲದ ವಿಗ್ರಹ ಪಾಲನನ್ನು ಮತ್ತು ಕಳಚೂರಿ ವಂಶದ ಯುವರಾಜ ದೇವನನ್ನು ಸೋಲಿಸಿದ. ಇವನ ಕಾಲದಲ್ಲಿ ಪ್ರಾರಂಭವಾದ ಖಜುರಾಹೋದ ಚತುರ್ಭುಜ ದೇವಾಲಯ ಧನಂಗದ ಆಳ್ವಿಕೆಯ ಕಾಲದಲ್ಲಿ ಕಾಲದಲ್ಲಿ ಪೂರ್ಣಗೊಂಡಿತು. ಯಶೋವರ್ಮನ ಅನಂತರ ಅವನ ಮಗ ಧಂಗ ರಾಜನಾದ. ಈತ ಚಂದೇಲರ ಸಮರ್ಥ ರಾಜರುಗಳಲ್ಲೊಬ್ಬ.  ಕಲಿಂಜರ, ಗ್ವಾಲಿಯಾರ್, ವಾರಣಾಸಿಗಳ ಮೇಲೆ ಈತ ತನ್ನ ಅಧಿಕಾರ ಸ್ಥಾಪಿಸಿದ. ಧಂಗ ದೀರ್ಘ ಕಾಲ (950 - 1008) ಆಳಿ ತನ್ನ ರಾಜ್ಯದಲ್ಲಿ ನೂರಾರು ದೇವಾಲಯಗಳನ್ನು ಕಟ್ಟಿಸಿದ. ಆದರೆ ಅನಂತರ ಬಂದ ದೊರೆಗಳು ದಾಳಿಗಳಿಂದ ದುರ್ಬಲರಾಗಿದ್ದುದರಿಂದ, ಅನೇಕರು ಆಳ್ವಿಕೆ ನಡೆಸಿದರೂ ಮಹಮದ್ ಘಜ್ನಿಯ ಧಾಳಿಗಳಿಂದ ಚೇತರಿಸಿಕೊಳ್ಳಲಿಲ್ಲ. 
 (ನೋಡಿ- ಚಂದೇಲರು) 

ಮಾಳವದ ಪರಮಾರರು : ಉಪೇಂದ್ರ ಅಥವಾ ಕೃಷ್ಣರಾಜ ನರ್ಮದಾ ನದಿಯ ಉತ್ತರ ಪ್ರದೇಶದ ಮಾಳವದಲ್ಲಿ 9 ನೆಯ ಶತಮಾನದ ಆಧಿಬಾಗದಲ್ಲಿ ಈ ರಾಜ್ಯ ಸ್ಥಾಪಿಸಿದ.  ಇವನ ರಾಜಧಾನಿ ಧಾರಾ. ಈ ಮನೆತನದಲ್ಲಿ ಎಂಟು ಜನ ಆಳಿದರು. ಅವರಲ್ಲಿ ಮುಜ ಮತ್ತು ಭೋಜ ಇವರು ಪ್ರಸಿದ್ಧ ದೊರೆಗಳು ಮುಂಜ ಕಲ್ಯಾಣದ ಚಾಳುಕ್ಯರೊಂದಿಗೆ ದೀರ್ಘಕಾಲಹೋರಾಡಿ ರಣಭೂಮಿಯಲ್ಲೇ ಅಸುನೀಗಿದ (995). ಮುಂಜನ ಅನಂತರ ಅವನ ಸೋದರ ಸಿಂಧುರಾಜ, ಅನಂತರ ಅವನ ಮಗ ಭೋಜ ಆಳಿದರು. ಭಾರತದ ಪ್ರಖ್ಯಾತ ರಾಜರಲ್ಲೊಬ್ಬನಾದ ಭೋಜನ ಕಾಲದಲ್ಲಿ (100 - 1055) ಮಾಳವದ ವೈಭವ ಉತ್ತುಂಗ ಶಿಖರವನ್ನು ಮುಟ್ಟಿತು. ಭೋಜರಾಜದ ದಿಗ್ವಿಜಯಗಳು ಭಾರತೀಯ ದಂತಕಥೆಗಳಲ್ಲಿಯೂ ಶಾಸನಗಳಲ್ಲಿಯೂ ವರ್ಣಿತವಾಗಿದೆ. ಚಾಳುಕ್ಯ, ಚೇದಿ ಮತ್ತು ಮಹಮ್ಮದೀಯ ರಾಜರುಗಳ ವಿರುದ್ಧ ಸತತವಾಗಿ ಹೋರಾಡಿದ ಈತ 1066 ರಲ್ಲಿ ಒಂದುದೊಡ್ಡ ಗಂಡಾಂತರವನ್ನು ಎದುರಿಸಬೇಕಾಯಿತು. ಚಾಳುಕ್ಯರ ರಾಜ ಒಂದನೆಯ ಸೋಮೇಶ್ವರ, ಗುಜರಾತಿ ಭೀಮ, ದಹಾಲದ ಕರ್ಣ ಒಂದು ಒಕ್ಕೂಟವನ್ನು ಮಾಡಿಕೊಂಡು ಭೋಜರಾಜನ ವಿರುದ್ಧ ಯುದ್ಧ ಹೂಡಿದರು. ಈ ಯುದ್ಧದಲ್ಲಿ ಭೋಜರಾಜ ಹೋರಾಡಿ ಸೋತು ವೀರಮರಣವನ್ನಪ್ಪಿದ. ಭೋಜ ಸಾಹಿತ್ಯದಲ್ಲೂ ಹೆಚ್ಚು ಅಭಿರುಚಿ ಹೊಂದಿದ್ದು ಇದರ ಬೆಳೆವಣಿಗೆಗೆ ಪ್ರೋತ್ಸಾಹ ನೀಡಿದ. ಈತ ಕಾವ್ಯ, ಖಗೋಳಶಾಸ್ತ್ರ, ವಾಸ್ತುಶಿಲ್ಪ, ನ್ಯಾಯ, ವೈದ್ಯ, ತತ್ತ್ವ, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ರಚಿಸಿದ್ದಾನೆಂದು ಹೇಳಲಾಗಿದೆ.  ಈತ ತಾನು ಕಟ್ಟಿಸಿದ 104 ದೇವಾಲಯಗಳಿಗೆ ಸರಿಸಮಾನವಾಗುವಂತೆ 104 ಕಾವ್ಯಗಳನ್ನೂ ರಚಿಸಿದ್ದನೆಂದೂ ಪ್ರತೀತಿ. ಈತ ತನ್ನ ರಾಜಧಾನಿಯಾಗಿದ್ದ ಧಾರಾ ನಗರದಲ್ಲಿ ಸರಸ್ವತೀ ದೇವಾಲಯ ಎಂಬ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ. ಪ್ರಭಾಚಂದ್ರಸೂರಿ, ಶಾಂತಿಸೇನ ಮತ್ತು ಧನಪಾಲ ಎಂಬ ಜೈನಕವಿಗಳು ಈತನ ಆಸ್ಥಾನದಲ್ಲಿದ್ದರು. ಇವನು ಶೈವಫಂಥದ ಅನುಯಾಯಿಯಾಗಿದ್ದ. ಆದರೂ ಜೈನ, ಬೌದ್ಧ ಮತ್ತು ಹಿಂದೂ ಧರ್ಮಗಳಿಗೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ಏರ್ಪಡಿಸಿ ತನ್ನ ಧಾರ್ಮಿಕ ಸಹಿಷ್ಣುತೆಯನ್ನು ಪ್ರದರ್ಶಿಸಿದ. ಈತ ನಿರ್ಮಿಸಿದ ಅನೇಕ ಕೆರೆಕಟ್ಟೆಗಳಲ್ಲಿ ಭೋಜಪುರ ಸರೋವರ ಬಹಳ ಪ್ರಸಿದ್ಧವಾದದ್ದು. ಭೋಜನ ಅನಂತರ ಪರಮಾರರ ವಂಶ ಅವನತಿಯ ಹಾದಿಯನ್ನು ಹಿಡಿದು 1408 ರಲ್ಲಿ ಮಹಮ್ಮದೀಯರ ಧಾಳಿಗಳಿಂದ ಅಂತ್ಯಗೊಂಡಿತು.
ಶೌರ್ಯ, ದೇಶಭಕ್ತ, ಸ್ವಾಮಿ ನಿಷ್ಠೆಗಳೇ ಧ್ಯೇಯವಾಗಿದ್ದ ರಜಪೂತರು ಪರಕೀಯರ ಧಾಳಿಗಳಿಂದ ದೇಶರಕ್ಷಣೆಗೆ ಹೋರಾಡಿದರಾದರೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುತ್ತಿದ್ದುದರಿಂದ ಆಗಾಗ ಅಂತಃಕಲಹಗಳೇರ್ಪಟ್ಟು ಹೊರಗಣ ಶತ್ರುಗಳಿಗೆ ಸೋಲಬೇಕಾಗುತ್ತಿತ್ತು. ರಜಪೂತ ಸ್ತ್ರೀಯರೂ ಧೀರ, ಉದಾತ್ತ ತತ್ತ್ವಗಳನ್ನು ಅನುಸರಿಸುತ್ತಿದ್ದರು. ಪರಿಯ ಕಷ್ಟಗಳು ತಮ್ಮದೆಂದು ಭಾವಿಸಿ, ಅವನಿಗೆ ಸಹಕಾರ ನೀಡುತ್ತಿದ್ದರು. ಅವರಲ್ಲಿ ಸತಿ ಅಥವಾ ಜೊಹರ್ ಪದ್ಧತಿ ರೂಢಿಯಲ್ಲಿತ್ತು.

ಆಡಳಿತ : ರಜಪೂರತ ಸರ್ಕಾರ ಊಳಿಗಮಾನ್ಯ ಪದ್ಧತಿಯ ಲಕ್ಷಣಗಳನ್ನು ಹೊಂದಿತ್ತು. ಆದ್ದರಿಂದ ರಾಜ್ಯದ ಸುಭದ್ರತೆ ಜಹಗೀರುದಾರರ ನಿಷ್ಠೆಯನ್ನು ಅವಲಂಬಿಸಿತ್ತು. ಆಡಳಿತದ ಅನುಕೂಲಕ್ಕೋಸ್ಕರ ರಾಜ್ಯವನ್ನು ಪ್ರಾಂತ್ಯಗಳನ್ನಾಗಿ ವಿಭಾಗಿಸಿ ಜಹಗೀರುದಾರರನ್ನು ಪ್ರಾಂತ್ಯಾಧಿಕಾರಿಗಳನ್ನಾಗಿ ನೇಮಿಸುತ್ತಿದ್ದರು.  ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಅತಿಮುಖ್ಯ ಆದಾಯದ ಮೂಲಗಳೆಂದರೆ ಭೂಕಂದಾಯ ಮತ್ತು ಹಲವು ರೀತಿಯ ತೆರಿಗೆಗಳು. ರಾಜನೇ ಸರ್ಕಾರದ ಮುಖಂಡ, ಅವನು ಎಲ್ಲಿಯವರೆಗೆ ಬಲಿಷ್ಠನೋ ಅಲ್ಲಿಯವರೆಗೆ ಅವನ ಪ್ರಭಾವ ನಡೆಯುತ್ತಿತ್ತು. ರಾಜನ ಅಸಮರ್ಥತೆಯನ್ನು ಅರಿತ ತಕ್ಷಣವೇ ಪ್ರಾಂತ್ಯಾಧಿಕಾರಿಗಳು ದಂಗೆ ಏಳುತ್ತಿದ್ದರು. ಆದ್ದರಿಂದ ಆಗಾಗ ಇಂಥ ದಂಗೆಗಳನ್ನು ಹತ್ತಿಕ್ಕುವುದು ಅನಿವಾರ್ಯವಾಗಿತ್ತು.
ಸಾಮಾಜಿಕ ವ್ಯವಸ್ಥೆ : ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದ್ದ ಸಾಮಾಜಿಕ ವ್ಯವಸ್ಥೆಯ ಲಕ್ಷಣಗಳನ್ನು ರಜಪೂತರ ಕಾಲದಲ್ಲಿಯೂ ಕಾಣಬಹುದು. ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಣಗಳಿದ್ದವು. ಇವುಗಳ ಜೊತೆಗೆ ಅನೇಕ ಉಪಜಾತಿಗಳಿದ್ದುವು. ಕಾಯಸ್ಥರೆಂಬ ಹೊಸ ಜಾತಿ ರಜಪೂತರ ಕಾಲದಲ್ಲಿ ಉದಯಿಸಿತು. ಜಾತಿಯ ಕ್ಲಿಷ್ಟತೆ, ಸಂಕುಚಿತ ಭಾವನೆ ಅನ್ಯಜಾತಿಗಳ ಸೇರ್ಪಡೆಗೆ ಅಡ್ಡಿಯಾಗಿತ್ತು. ಸ್ರ್ತೀಯರನ್ನು ಗೌರವದಿಂದ ಕಾಣಲಾಗುತ್ತಿತ್ತು. ಏಕಪತ್ನಿತ್ವಪದ್ಧತಿ ಸಾಮಾನ್ಯವಾಗಿ ರೂಢಿಯಲ್ಲಿತ್ತಾದರೂ ಬಹುಪತ್ನಿತ್ವ ಪದ್ಧತಿಯೂ ಸಮಾಜದಲ್ಲಿತ್ತು. ಹೆಣ್ಣುಶಿಶು ಜನಿಸಿದರೆ ತಂದೆತಾಯಿಗಳ ದುರಾದೃಷ್ಟವೆಂದೂ ಗಂಡು ಮಗು ಜನಿಸಿದರೆ ಪೂರ್ವಜನ್ಮದ ಪುಣ್ಯವೆಂದೂ ಭಾವಿಸಲಾಗುತ್ತಿತ್ತು. ಹೆಣ್ಣುಮಗು ಜನಿಸಿದ ತಕ್ಷಣವೇ ಕೊಂದು ಹಾಕಿದ ಪ್ರಕರಣಗಳೂ ಸಾಕಷ್ಟು ಇವೆ.  ರಜಪೂತ ಕನ್ಯೆ ತನಗೆ ಇಷ್ಟ ಬಂದ ವರನನ್ನು ಆರಿಸಿಕೊಳ್ಳಬಹುದಾದ ಸ್ವಯಂವರ ಪದ್ಧತಿ ಜಾತಿಯಲ್ಲಿ ಇತ್ತು. ಸಹಗಮನ ಪದ್ಧತಿಯೂ ರೂಢಿಯಲ್ಲಿತ್ತು.

ಸಾಹಿತ್ಯ: ರಜಪೂತರು ಸಾಹಿತ್ಯಕ್ಕೂ ಹೆಚ್ಚು ಪ್ರೋತ್ಸಾಹ ನೀಡಿದರು. ಹಲವು ರಜಪೂತ ದೊರೆಗಳು ಕವಿಗಳಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಧ್ಯ ಭಾರತದ ಧಾರ್‍ನ ರಾಜನಾದ ರಾಜ ಮುಂಜ ಪ್ರಸಿದ್ಧ ಕವಿಯಾಗಿದ್ದ. ಇವನ ಉತ್ತರಾಧಿಕಾರಿಯಾದ ಭೂಜ ಪ್ರಖ್ಯಾತ ಕವಿಯಾಗಿ ವೈದ್ಯಶಾಸ್ತ್ರ, ಖಗೋಳಶಾಸ್ತ್ರ. ಧರ್ಮ, ಕಲೆ ವಾಸ್ತುಶಿಲ್ಪ ಮತ್ತು ನಿಘಂಟುಕಾರನಾಗಿದ್ದ. ಭೋಜನ ಆಸ್ಥಾನ ಪದ್ಮಗುಪ್ತ, ದಾನಿಕ, ಹಲಾಯುಧ, ಧನಂಜಯ ಮೊದಲಾದ ಸುಪ್ರ್ರಸಿದ್ಧ ಕವಿಗಳಿಂದ ಕೂಡಿತ್ತು. ಭಟ್ಟಿ ರಾವಣವಧಾ, ಮಾಘ ಶಿಶುಪಾಲವಧಾ, ಪದ್ಮಗುಪ್ತ, ನವಶಾಂಕಚರಿತ, ದಾಮೋದರ ಗುಪ್ತನ ಕಲ್ತಾನಿಮತ ಮತ್ತು ಜಯದೇವ ಗೀತ ಗೋವಿಂದ ಎಂಬ ಗ್ರಂಥಗಳನ್ನು ರಚಿಸಿ ಶ್ರೇಷ್ಠ ಕೃತಿಗಳಾಗಿವೆ. ಸಂಬಂಧುವಿನ ವಾಸವದತ್ತ ಮೊದಲಾದವು ರಜಪೂತರ ಕಾಲದ ಶ್ರೇಷ್ಠಕೃತಿಗಳಾಗಿವೆ. ಭವಭೂತಿ ವಾಲತಿ ಮಾಧವ, ಮಹಾವೀರ ಚರಿತ ಮತ್ತು ಉತ್ತರ ರಾಮಚರಿತ ಎಂಬ ನಾಟಕಗಳನ್ನು ರಚಿಸಿ ಕಾಳಿದಾಸನಷಟೆ ಪ್ರಸಿದ್ಧಿ ಪಡೆದ. ಅದೇ ರೀತಿ ಆನಂದವರ್ಧನ ಪ್ರಬೊಧಚಂದ್ರ, ರಾಜಶೇಖರ ಕರ್ಪೂರಮಂಜರಿ. ಮುರಾರಿ ಅರ್ನರ್ಘರಾರ್ಘವ ಎಂಬ ಪ್ರಸಿದ್ಧ ನಾಟಕಗಳನ್ನು ರಚಿಸಿದ್ದಾರೆ. ಭಟ್ಟನಾರಾಯಣ ವೇಣಿಸಂಹಾರ ಎಂಬ ನಾಟಕ ರಚಿಸಿದ. ಈ ಕಾಲದ ಇತಿಹಾಸಕಾರರಲ್ಲಿ ಕಲ್ಹಣ, ಪ್ರಸಿದ್ಧ ಜೀವನಚರಿತ್ರೆಗಳಾದ ಚಾಂದ್ ಬರ್ದೋಯಿಯ ಪೃಥ್ವೀರಾಜವಿಜಯ, ಹೇಮಚಂದ್ರನ ಕುಮಾರಚರಿತ, ಕ್ಷೇಮೇಂದ್ರನ ಬೃಹತ್ ಕಥಾಮಂಜರಿ, ಸೋಮ ದೇವನ ಕಥಾಸರಿತ್‍ಸಾಗರ ಮೊದಲಾದವು ಉಲ್ಲೇಖನೀಯ.

ಧಾರ್ಮಿಕ ಪರಿಸ್ಥಿತಿ : ಬಹುತೇಕ ರಜಪೂತ ರಾಜರು ಹಿಂದೂಧರ್ಮದ ಅನುಯಾಯಿಗಳಾಗಿದ್ದರು. ಅನೇಕ ದೇವಸ್ಥಾನಗಳನ್ನು ನಿರ್ಮಿಸಿದರು. ಬೌದ್ಧ ಧರ್ಮ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತ್ತು. ಇವರು ಜೈನಧರ್ಮಕ್ಕೂ ಪ್ರೋತ್ಸಾಹ ನೀಡಿದರು. ಜೈನಧರ್ಮ ಇವರ ಕಾಲದಲ್ಲಿ ರಾಜಸ್ತಾನ ಮತ್ತು ಗುಜರಾತ್‍ಗಳಲ್ಲಿ ಮಾತ್ರ ಹೆಚ್ಚು ಪ್ರಚಾರದಲ್ಲಿತ್ತು.
ಕಲೆ : ರಜಪೂತರ ಕಾಲದ ಬೃಹತ್ ಕಟ್ಟಡಗಳು ವಾಸ್ತುಶಿಲ್ಪದ ಪರಿಪಕ್ವತೆ ತನ್ನತನ ಹೊಂದಿದ್ದುವು. ವಾಸ್ತುಶಿಲ್ಪ ಮತ್ತು ಕಲೆ ಇವರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿ ಮುಟ್ಟಿದವು. ರಜಪೂತ ವಾಸ್ತುಶಿಲ್ಪದ ಮುಖ್ಯ ಕಟ್ಟಡಗಳಲ್ಲಿ ಚಿತ್ತೋರ್ ಘರ್, ರಣಥಂಬೋರ್, ಮಾಂಡು, ಗ್ವಾಲಿಯರ್ ಮುಂತಾದ ಕಡೆಗಳಲ್ಲಿ ನಿರ್ಮಿಸಿರುವ ವಿಶಾಲ ಮತ್ತು ಭದ್ರವಾದ ಕೋಟೆಗಳು ಮುಖ್ಯವಾದವು. ಗ್ವಾಲಿಯರ್‍ನಲ್ಲಿರುವ ಮಾನ್‍ಸಿಂಗ್‍ನ ಅರಮನೆ. ಜಯಪುರದಲ್ಲಿರುವವ ಭವನಗಳೂ ಉದಯಪುರದಲ್ಲಿರುವ ಅರಮನೆಗಳೂ ಸುಂದರ ಶಿಲ್ಪಕೃತಿಗಳಾಗಿವೆ. ರಜಪೂತರ ಕಾಲದ ಪ್ರಸಿದ್ಧ ದೇವಾಲಯಗಳೆಂದರೆ ಸೌರಾಷ್ಟ್ರದ ಸೋಮನಾಥ, ದೇವಾಲಯ, ಒರಿಸ್ಸದ ಭುವನೇಶ್ವರದ ದೇವಾಲಯ, ಪುರಿಯ ಜಗನ್ನಾಥ ದೇವಾಲಯ, ಹಾಗೂ ಕೋಣಾರ್ಕದಲ್ಲಿರುವ ಸೂರ್ಯಮಂದಿರ ಮತ್ತು ಬುಂದೇಲ್ ಖಂಡದ ಖುಜರಾಹೋ ಮುಂತಾದವು. ಖೂಜುರಾಹೋವಿನಲ್ಲಿ ಸುಮಾರು ಮೂವತ್ತು ಮಂದಿರಗಳಿವೆ. ಚಿತ್ತೂರಿನ ಕಾಳಿಕಾ ಮಾತೆಯ ಮಂದಿರ, ಉದಯಪುರ ಬಳಿಯಿರುವ ಏಕಲಿಂಗ ದೇವಾಲಯ ಉತ್ತಮ ಕಟ್ಟಡಗಳು.
					                     (ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ